ಬಳ್ಳಾರಿ: ಸುಪ್ರೀಮ್ಕೋರ್ಟ್ನ ತೀರ್ಪಿನಂತೆ, ರಾಜ್ಯ ಸರ್ಕಾರವು ಈ ಕೂಡಲೇ ಪರಿಶಿಷ್ಠ ಜಾತಿಯಲ್ಲಿನ `ಒಳ ಮೀಸಲಾತಿ’ಯನ್ನು ಜಾರಿಗೊಳಿಸುವಂತೆ ಆಗ್ರಹಿಸಿ, ಇಂದು ಬಳ್ಳಾರಿ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಪರಿಶಿಷ್ಠ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿಯ ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನಾ ಧರಣಿ ನಡೆಸಲಾಯಿತು.
ಪರಿಶಿಷ್ಠ ಜಾತಿಗಳಲ್ಲಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಅತಿ ಹೆಚ್ಚು ಹಿಂದುಳಿದಿರುವ ಜಾತಿಗಳ ಅಭಿವೃದ್ಧಿಯ ಸದುದ್ದೇಶದಿಂದ ಆಯಾ ಜಾತಿಗಳಿಗೆ ಸೇರಿದವರಿಗೆ ಮೀಸಲಾತಿ ಸೌಲಭ್ಯ ತಲುಪಲು, ಒಳಮೀಸಲಾತಿ ನೀಡುವ ಸಾಂವಿಧಾನಿಕ ಅಧಿಕಾರ ಆಯಾ ರಾಜ್ಯ ಸರ್ಕಾರಗಳಿಗಿವೆ ಎಂದು ಸುಪ್ರೀಮ್ಕೋರ್ಟ್ನ ಸಾಂವಿಧಾನಿಕ ಪೂರ್ಣ ಪೀಠವು ಕಳೆದ ಆ.1 ರಂದು ಐತಿಹಾಸಿಕ ತೀರ್ಪು ನೀಡಿದೆ. ಆದುದರಿಂದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಒಳ ಮೀಸಲಾತಿಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ, ಧರಣಿ ನಡೆಸಲಾಯಿತು.
ಒಳಮೀಸಲಾತಿ ಜಾರಿಗೆ ಬದ್ಧ ಎಂದು ಹೇಳುತ್ತಿರುವ ರಾಜ್ಯ ಸರ್ಕಾರವು ಎರಡೂವರೆ ತಿಂಗಳುಗಳು ಕಳೆದರೂ, ಈ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳದಿರುವುದು ನಿಜಕ್ಕೂ ದುರದೃಷ್ಟಕರ. ಸುಪ್ರೀಮ್ಕೋರ್ಟ್ ತೀರ್ಪನ್ನು ತಕ್ಷಣವೇ ರಾಜ್ಯ ಸರ್ಕಾರವು ಜಾರಿಗೆ ತರಬೇಕು. ಈ ತಿಂಗಳೊಳಗಡೆ ಜಾರಿಗೊಳಿಸದಿದ್ದಲ್ಲಿ ಹೋರಾಟ ಸಮಿತಿಯು ರಾಜ್ಯಾದ್ಯಂತ ಹೋರಾಟವನ್ನು ತೀವ್ರಗೊಳಿಸಲಿದೆ. ಈ ಕುರಿತಂತೆ ನಿರ್ಲಕ್ಷö್ಯ ತೋರಿದಲ್ಲಿ, ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಪಾಠ ಕಲಿಸಬೇಕಾಗುತ್ತದೆ ಎಂದು ಸಮಿತಿಯು ಎಚ್ಚರಿಸಿದೆ.
ಪರಿಶಿಷ್ಠ ಜಾತಿಗಳ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿಯ ರಾಜ್ಯ ಪ್ರಧಾನ ಸಂಚಾಲಕ ಹೆಚ್.ಹನುಮಂತಪ್ಪ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಜನ ಕಾರ್ಯಕರ್ತರು, ಮುಖಂಡರು ಹಾಗೂ ವಿವಿಧ ದಲಿತಪರ ಸಂಘಟನೆಗಳ ಧುರೀಣರು ಪಾಲ್ಗೊಂಡಿದ್ದರು. ರಾಜ್ಯ ಸರ್ಕಾರವು ಕೂಡಲೇ ಒಳಮೀಸಲಾತಿ ಜಾರಿಗೆ ತರುವಂತೆ ಆಗ್ರಹಿಸಿ, ಘೋಷಣೆಗಳನ್ನು ಕೂಗಿದರು.







